ನವರತ್ನ ರಾಮರಾವ್
1877-1960. ಕೆಲವು ನೆನಪುಗಳು ಎಂಬ ಸುರಸ ಆತ್ಮಚರಿತ್ರೆಯ ಲೇಖಕರು. ಮನೆತನ ಮಹಾರಾಷ್ಟ್ರ ದೇಶಸ್ಥ ಬ್ರಾಹ್ಮಣರದು; ಮೂಲತಃ ವೈದಿಕರು. ಇವರ ಹಿರಿಯರು ಇವರ ಗುರುಮಠವಾದ ಉತ್ತರಾದಿ ಮಠದ ಪೀಠಸ್ಥರಾಗಿದ್ದುದುಂಟು. ಮಹಾವಿದ್ವಾಂಸರೆಂದು ಹೆಸರಾದ ಇತರರೂ ಮನೆತನಕ್ಕೆ ಕೀರ್ತಿ ತಂದವರು. ಒಂದು ತಲೆಮಾರಿನಲ್ಲಿ ಇಂಥ ವಿದ್ವಾಂಸರು ಒಂಬತ್ತು ಜನ ಇದ್ದರೆಂದೂ ಅಂದಿನ ಮಠಾಧಿಪತಿ ಅವರನ್ನು ನವರತ್ನ ಎಂದು ಕರೆದರೆಂದೂ ಅದರಿಂದ ಇವರ ಮನೆಯ ಹೆಸರು ನವರತ್ನ ಎಂದಾಯಿತೆಂದೂ ರಾಯರೇ ಹೇಳುತ್ತಿದ್ದರು. ರಾಯರು ನಿಜಕ್ಕೂ ಇಂಥ ಹಿರಿಯರ ಹೆಸರನ್ನು ಹೇಳಬಲ್ಲ ಪ್ರತಿಭಾವಂತರಾಗಿದ್ದರು. ಇವರ ತಂದೆ ಮೈಸೂರು ಸಂಸ್ಥಾನದ ಎಂಜಿನಿಯರಿಂಗ್ ಶಾಖೆಯಲ್ಲಿ ಅಧಿಕಾರದಲ್ಲಿದ್ದರು. ರಾಯರ ಜನ್ಮದಿನ 29-5-1877. ಹುಟ್ಟಿದ್ದು ಬೆಂಗಳೂರಿನಲ್ಲಿ. ಚಿಕ್ಕಂದಿನಲ್ಲಿಯೇ ತಾಯನ್ನು ಕಳೆದುಕೊಂಡರು. ಬೆಂಗಳೂರಿನಲ್ಲಿ ಓದಿ ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾದರು. ಕಾಲೇಜಿನಲ್ಲಿದ್ದ ದಿನಗಳಲ್ಲಿ ಇವರಿಗೆ ಅಲ್ಲಿಯ ಇಂಗ್ಲಿಷ್ ಅಧ್ಯಾಪಕರಾದ ಟೇಟ್ ಸಾಹೇಬರ ಮತ್ತು ಸಹಪಾಠಿಯಾಗಿದ್ದ ಚಕ್ರವರ್ತಿ ರಾಜಗೋಪಾಲಾಚಾರ್ಯರ ಗಾಢ ಸ್ನೇಹ ಲಭಿಸಿತು. ಅಂಥ ಸ್ನೇಹ ತಮ್ಮ ಜೀವನದ ಭಾಗ್ಯ ಎಂದು ರಾಯರು ಹೇಳುತ್ತಿದ್ದರು. ಈ ದಿನಗಳಲ್ಲಿ ರಾಯರು ಇಂಗ್ಲಿಷ್ ಭಾಷೆಯಲ್ಲಿ ಅಸಾಧಾರಣ ಪಾಂಡಿತ್ಯವನ್ನು ಪಡೆದರು. ಈಜಿನಲ್ಲಿ, ಕ್ರಿಕೆಟ್ ಆಟದಲ್ಲಿ, ಗರಡಿ ಸಾಧನೆಯಲ್ಲಿ ಹೆಸರಾದರು. ಆಮೇಲೆ ಮದರಾಸಿಗೆ ಹೋಗಿ ಬಿ.ಎಲ್. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಜಗೋಪಾಲಾಚಾರ್ಯರೊಂದಿಗೆ ಲಾಯರಾಗಿ ನಿಂತರು. ತಂದೆಯ ಅಪೇಕ್ಷೆಯಂತೆ ಒಂದೆರಡು ವರ್ಷದಲ್ಲಿ ಮೈಸೂರಿನ ಆಡಳಿತದಲ್ಲಿ ರೆವೆನ್ಯೂ ಪ್ರೊಬೇಷನರ್ ಅಧಿಕಾರವನ್ನು ಒಪ್ಪಿಕೊಂಡು ಇಲ್ಲಿಗೇ ಬಂದರು. ದಕ್ಷ ಸತ್ಯವಂತ ಅಧಿಕಾರಿಯೆಂದು ಕೀರ್ತಿಗಳಿಸಿ ಅಧಿಕಾರ ಶ್ರೇಣಿಯಲ್ಲಿ ಮೇಲೆ ಏರಿ ಉದ್ಯೋಗ ವ್ಯಾಪಾರಗಳ ಶಾಖೆಯ ಮುಖ್ಯಾಧಿಕಾರಿಯಾಗಿ ವಿಶ್ರಾಂತರಾದರು (1934). ರಾಯರು ಮಾತಿನಲ್ಲಿ ಚತುರರು. ರುಚಿಕಟ್ಟುವಂತೆ ಮನಮುಟ್ಟುವಂತೆ ಪಾಂಕ್ತವಾಗಿ ಮಾತನಾಡುವುದನ್ನೇ ಒಂದು ಕಲೆಯಂತೆ ಸಾಧಿಸಿದ್ದರು. ಅಧಿಕಾರದಲ್ಲಿದ್ದ ದಿನಗಳಲ್ಲಿ ಪ್ರಜಾಪ್ರತಿನಿಧಿ ಸಭೆಗಳಲ್ಲಿ ಲೆಜಿಸ್ಲೆಟಿವ್ ಕೌನ್ಸಿಲಿನಲ್ಲಿ ಸ್ವಾರಸ್ಯವಾಗಿ ಭಾಷಣಮಾಡಿ ಹೆಸರು ಪಡೆದರು. ಸಂಸ್ಕøತ ಹಾಗೂ ಫ್ರೆಂಚ್ ಭಾಷೆಗಳನ್ನು ಅಭ್ಯಾಸ ಮಾಡಿದರು. ಸ್ವಲ್ಪ ಸಂಗೀತ ಕಲಿತರು. ಅಧಿಕಾರದಲ್ಲಿದ್ದ ದಿವಸಗಳಲ್ಲಿ ಗೆಳೆಯರ ಅಪೇಕ್ಷೆಯನ್ನು ಈಡೇರಿಸಲು ಕೆಲವು ಸಣ್ಣಕಥೆಗಳನ್ನು ಬರೆದರು. ಲಕ್ಷ್ಮಣರಾಯನ ಭಾಗ್ಯ ಇವರ ಮೊದಲ ಕಥೆ. ಇದು ನರಬಲಿಕಾರರ ಕೈಗೆ ಸಿಕ್ಕಿ ತಪ್ಪಿಸಿಕೊಂಡ ಇವರ ಬಂಧು ಒಬ್ಬರ ಕಥೆ. ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದ ಇದು ಹೇಳುವ ಸಂಗತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ. ಆಮೇಲೆ ಇಂಗ್ಲಿಷಿನಲ್ಲಿ, ಕನ್ನಡದಲ್ಲಿ ಅಲ್ಪಸ್ವಲ್ಪ ಬರೆಹ ನಡೆಯಿತು. ವಿಶ್ರಾಂತರಾದ ಮೇಲೆ, ಗೆಳೆಯರ ಅಪೇಕ್ಷೆಯನ್ನು ಈಡೇರಿಸಲು ತಾವು ಅಮಲ್ದಾರರಾಗಿದ್ದ ದಿನಗಳ ನೆನಪನ್ನು ಬರೆದರು. ಇದೇ ಕೆಲವು ನೆನಪುಗಳು ಎಂಬ ಗ್ರಂಥ. ಈ ಬರೆಹದ ಬಹುಪಾಲು ಮಾಸ್ತಿಯವರ ಜೀವನ ಮಾಸಪತ್ರಿಕೆಯಲ್ಲಿ ಪ್ರಕಟವಾಯಿತು. ಜೀವನ ಕಾರ್ಯಾಲಯವೇ ಇವರ ಸಣ್ಣಕಥೆಗಳ ಪುಸ್ತಕ ಒಂದನ್ನೂ ಈ ನೆನಪುಗಳ ಪುಸ್ತಕವನ್ನೂ ಪ್ರಕಟಿಸಿತು. ಗಾತ್ರದಲ್ಲಿ ಕಡಿಮೆಯಾದರೂ ಶ್ರೀಯುತರ ಬರೆಹ ಯೋಗ್ಯತೆಯಲ್ಲಿ ಬಹು ಹಿರಿಯ ಮಟ್ಟದ್ದು. ಕೊನೆಯ ದಿನಗಳಲ್ಲಿ ರಾಯರು ಮಾಸ್ತಿಯವರ ಚೆನ್ನಬಸವನಾಯಕ ಕಾದಂಬರಿಯನ್ನು ಇಂಗ್ಲಿಷಿಗೆ ಭಾಷಾಂತರಿಸಿದರು; ಕನ್ನಡ ಸಾಹಿತ್ಯದಲ್ಲಿ ರಾಯರ ಆತ್ಮಚರಿತ್ರೆಯ ಪುಸ್ತಕ ಏಕೈಕ ಎನ್ನಬಹುದಾದ ಸುರಸ ಸುಂದರ ಗ್ರಂಥವಾಗಿ ನಿಂತಿದೆ.								
	(ಎಂ.ವಿ.ಐ.)

ಕೆಲವು ನೆನಪುಗಳು ನವರತ್ನ ರಾಮರಾಯರ ಆತ್ಮ ಚರಿತ್ರೆಯಷ್ಟೆ ಅಲ್ಲದೆ ಹಿಂದಿನ ಮೈಸೂರು ಸಂಸ್ಥಾನದಲ್ಲಿ ಸುಮಾರು ಮೂರು ದಶಕಗಳ ಕಾಲದ ಅಧಿಕಾರ ವ್ಯವಸ್ಥೆ, ಆಡಳಿತ ವಿಧಾನ ಮತ್ತು ಜನಜೀವನದ ಅದ್ಭುತ ದಾಖಲೆಯು ಹೌದು. ಅವರದು ಸೊಗಸಾದ ಹಾಸ್ಯ ಪ್ರಜ್ಞೆ. ಅಷ್ಟೇ ಸೊಗಸಾದ ಭಾಷೆ. ಕೃತಿಯು ಬಹು ಲವಲವಿಕೆಯ, ಸ್ಪಷ್ಟವಾದ ನಿರೂಪಣೆಯಿಂದ ಓದುಗನನ್ನು ಆಕರ್ಷಿಸುತ್ತದೆ. ಇನ್ನು ಕೆಲವು ಪಾತ್ರಗಳೂ ಪ್ರಸಂಗಗಳೂ ಮನಸ್ಸಿನಲ್ಲಿ ಸ್ಥಿರವಾಗಿ ನಿಂತುಬಿಡುತ್ತದೆ. ರಾಮರಾಯರ ವ್ಯಕ್ತಿತ್ವ ಬಹು ಸ್ಪಷ್ಟವಾಗಿ ಇಲ್ಲಿ ರೂಪ ತಾಳುತ್ತದೆ. ನಿಜವಾಗಿ ಬುದ್ದಿವಂತರಾದ ತಾನು ಬುದ್ದಿವಂತ ಎನ್ನುವುದನ್ನು ತಿಳಿದ, ಅಹಂಭಾವವಿರುವ, ತನಗೆ ಅಹಂಭಾವವಿದೆ ಎಂದು ತಿಳಿದ, ಗಾಢವಾದ ಕರ್ತವ್ಯ ಪ್ರಜ್ಞೆಯ, ಪ್ರಭುನಿಷ್ಠ-ಪ್ರಭುನಿಷ್ಠರಾದ, ಸೊಗಸಾದ ಹಾಸ್ಯ ಪ್ರಜ್ಞೆಯ, ಆರೋಗ್ಯಕರ ಮತ್ತು ಶ್ರೇಣಿಯನ್ನು ಅನುಸರಿಸುವ ಲವಲವಿಕೆಯ ಅಧಿಕಾರಿ ವ್ಯಕ್ತಿ ಇಲ್ಲಿ ಮೂಡುತ್ತಾರೆ.
(ಪರಿಷ್ಕರಣೆ: ಎಲ್.ಎಸ್.ಶೇಷಗಿರಿರಾವ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ